ಟ್ಯಾಕಿಲೈಟ್

ಮ್ಯಾಗ್ಮ ಅಥವಾ ಮಾತೃಶಿಲಾದ್ರವದಿಂದ ಉಂಟಾಗುವ ಗಾಜುಶಿಲೆ. ಸಾಧರಣವಾಗಿ ಮ್ಯಾಗ್ಮವು ಮಾತೃಶಿಲಾದ್ರವವಾಗಿ ಹೆಪ್ಪುಗಟ್ಟಿ ನಾನಾ ಬಗೆಯ ಶಿಲೆಗಳನ್ನು ಉಂಟುಮಾಡುತ್ತದೆ. ಆರಿ ತಣ್ಣಗಾಗಲು ಹೆಚ್ಚು ಕಾಲವಾದಲ್ಲಿ ಶಿಲೆಯ ಖನಿಜಗಳು ಹರಳು ಹರಳುಗಳಾಗಿ ಕಾಣಿಸಿಕೊಂಡು ಶಿಲೆಯು ಕಣವಿನ್ಯಾಸದಿಂದ ಕೂಡಿರುತ್ತವೆ. ಹೀಗಾಗದೆ ಶಿಲಾದ್ರವ ಬಲುಬೇಗನೇ ಆರಿ ಹೆಪ್ಪುಗಟ್ಟಿದಾಗ ಖನಿಜ ವಸ್ತುಗಳು ಹರಳುಗಳಾಗಿ ಮಾರ್ಪಡಲು ಸಾಕಷ್ಟು ಅವಕಾಶವಿರುವುದಿಲ್ಲ. ಆಗ ಅದು ಯಾವ ರಚನೆಯೂ ಇಲ್ಲದೆ ಗಾಜಿನಂತೆ ಮಾರ್ಪಡುತ್ತದೆ. ಇದೇ ಟ್ಯಾಕಿಲೈಟ್. ಇದರಲ್ಲಿ ಯಾವ ಸ್ಪಷ್ಟ ಖನಿಜಗಳೂ ಕಂಡುಬರದೆ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಹೆಚ್ಚು ಪ್ರಮಾಣದಲ್ಲಿರುತ್ತವೆ. ಬಸಾಲ್ಟ್ ಎಂಬ ಮೂಲ ಅಗ್ನಿಶಿಲೆಗಳು ಬಹಿಸ್ಸರಣ (ಇರಪ್ಟಿವ್) ವರ್ಗದ ಮುಖ್ಯ ಶಿಲೆಗಳು. ಇವು ಭೂಮಿಯ ಮೇಲ್ಗಡೆ ಪ್ರವಾಹಗಳೋಪಾದಿಯಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಈ ಪ್ರವಾಹಗಳ ಅಂಚಿನಲ್ಲಿ ಶಿಲೆಯು ಗಾಜಿನಂತಿರುವುದರಿಂದ ಇದನ್ನು ಟ್ಯಾಕಿಲೈಟ್ ಎನ್ನುತ್ತಾರೆ.
(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ